भारतीय भाषाओं द्वारा ज्ञान

Knowledge through Indian Languages

Dictionary

Kumbarike Vrutti Padakosha (Kannada-Kannada)(KASAPA)

Kannada Sahitya Parishattu (KASAPA)

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous1234567891920Next >

ಅಂಬಲಿ ಗಡಿಗೆ

(ನಾ)
ಅಂಬಲಿ ಸ್ವಾರಿ, ಅಂಬ್ಲಿ ಗಡಿಗೆ, ಗಂಜಿಗಡಿಗೆ, ಅಂಬ್ಲಿ ಮಡಿಕೆ, ಜೋಳ, ರಾಗಿ ಮತ್ತು ಹುರಳಿ ಅಂಬಲಿ ಮಾಡಲು ಬಳಸುವ ಗಡಿಗೆ. ಉತ್ತರ ಕರ್ನಾಟಕದಲ್ಲಿ ಇದನ್ನು ಹೆಚ್ಚಾಗಿ ಬಳಸುವರು.
“ಅಂಬ್ಲಿ ಮಡಿಕೆ, ಅಮಟೆಕಾಯಿ ಹಾಲಕ್ಕಿ ಊಟ” (ಹಾಲಕ್ಕಿ ಜನರು ಮಾಡುವ ಊಟ) (ವಿಷ್ಣು ನಾಯ್ಕ)
ಗಂಜಿಗಡಿಗೆ ಇಳಿಸುವಾಗ ಪಲ್ಯಚಟಿಗೆ ತಯ್ಯಾರ (ತುಳುಗಾದೆ)

ಅಗ್ಗಿಷ್ಟಿಗೆ

(ನಾ)
ಅಗ್ಗಿಟಿಕೆ, ಅಗ್ಗಿಷ್ಟಿ, ಕುಮಟಿ, ಅಗ್ನಿ ಕುಂಡ, ಅಂಗಾರದಾನಿಕೆ ಬೆಂಕಿಯನ್ನು ಹೊತ್ತಿಸುವ ಒಂದು ಬಗೆಯ ಒಲೆ.
ಗಡಿಗೆಯ ತಳಭಾಗವನ್ನು ದುಂಡಾಗಿ ಒಡೆದು, ಅದನ್ನು ಬೋರಲಾಗಿಟ್ಟು, ಅದರ ಬಾಯಿಗೆ ಒಂದು ಮುಚ್ಚಳವನ್ನು ಹಾಕಿ, ಅದರ ತುಂಬಾ ಇದ್ದಿಲು ಹಾಕಿ ಕೆಂಡವನ್ನು ಮಾಡುವ ಸಾಧನ. ಪ್ರತ್ಯೇಕವಾಗಿ ಕೂಡ ಅಗ್ಗಿಷ್ಟಿಕೆ ಮಾಡುವರು. ಇದಕ್ಕೆ ಕಾಶ್ಮೀರದಲ್ಲಿ ಕಂಗರ್ ಎಂದೂ ಬೀದರ ಜಿಲ್ಲೆಯಲ್ಲಿ ‘ಥಾಳಿ’ ಎಂದು ಕರೆಯುವರು. ಇದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡ್ಯೋಯ್ಯಬಹುದು. ಚಳಿ ಪ್ರದೇಶದಲ್ಲಿ ಮಲಗುವ ಮಂಚದ ಕೆಳಗೆ ಇದನ್ನು ಇಡುವರು. ಬಾಣಂತಿಯರು, ದಮ್ಮು ಕಾಯಿಲೆಯವರು ಅಗ್ಗಿಷ್ಟಿಗೆ ಕೆಂಡವನ್ನು ಕಾಯಿಸುವರು. ಅಕ್ಕಸಾಲಿಗರು ಬೆಳ್ಳಿ – ಬಂಗಾರದ ಸಾಮಾನುಗಳನ್ನು ತಯಾರಿಸಲು ಬಳಸುವರು.
“ಅಗ್ಗಿಷ್ಟಿಕೆಯಲ್ಲಿ ಹೊಗೆಯಾಡಿದಂತೆ ಹೆಡೆಯಾಡುವುದು ಕಿರುಕುಳ” (ರಾಗೌ)
ಅಕ್ಕಸಾಲಿ ಮಾಡಿದ್ದು ಅಗ್ಗಿಷ್ಟಿಕೆಗೆ ಅಗಸ ಮಾಡಿದ್ದು ಬಟ್ಟೆಗೆ. (ಗಾದೆ)

ಅಗೋಳಿ

(ನಾ)
ಅನ್ನ ಬೇಯಿಸಲು ಬಳಸುವ ಅಗಲ ಬಾಯಿಯ ಗಡಿಗೆ. ದಕ್ಷಿಣಕನ್ನಡದಲ್ಲಿ ಈ ಪದ ವಿಶೇಷವಾಗಿ ಪ್ರಯೋಗದಲ್ಲಿದೆ.

ಅಚ್ಚು

(ನಾ,ಕ್ರಿ)
ಮುದ್ರೆ, ಪಡಿಅಚ್ಚು (a seal, a mark) ಅಚ್ಚೊತ್ತು ಮಣ್ಣಿನಲ್ಲಿ, ಮರದಲ್ಲಿ, ಲೋಹದಲ್ಲಿ ಮತ್ತು ಪ್ಲಾಸ್ಟಿಕ್ ಆಫ್ ಪ್ಯಾರಿಸ್-ನಲ್ಲಿ ತಮಗೆ ಬೇಕಾದ ಆಕಾರವನ್ನು ಕೊರೆದುಕೊಂಡು ಪಡಿಯಚ್ಚನ್ನು ತಯಾರಿಸುವರು. ಮಧ್ಯಭಾಗದಲ್ಲಿ ಸ್ವಲ್ಪ ತಗ್ಗಾಗಿರುವ ಮುಚ್ಚಳದಂತಹ ಒಂದು ಅಚ್ಚನ್ನು ತಯಾರಿಸಿಕೊಂಡು ವಿಶೇಷವಾಗಿ ಕುಂಬಾರ ಹೆಣ್ಣು ಮಕ್ಕಳು ವಿವಿಧ ಪ್ರಕಾರದ ಮಡಿಕೆ ಮತ್ತು ಮುಚ್ಚಳಗಳನ್ನು ತಯಾರಿಸುವರು. ವಿವಿಧ ವಿಗ್ರಹ, ಆಟಿಕೆ ಸಾಮಾನುಗಳನ್ನು ತಯಾರಿಸಲು ಅಚ್ಚುಗಳನ್ನು ಬಳಸುವರು. ಅಚ್ಚಿಗೂ, ಮುಚ್ಚಳಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಅಚ್ಚಿನ ಒಳತಳ ಮುಚ್ಚಳಕ್ಕಿಂತ ಆಳವಾಗಿರುತ್ತದೆ. ಅಚ್ಚಿಗೆ ದಿಂಡು ಅಲಂಕರಣ ಮಾಡಲು ಎತ್ತಿನ ಕೊಂಬಿನ ಚಿಕ್ಕ ತುಂಡಿನಲ್ಲಿ ಇಲ್ಲವೆ ಮಣ್ಣಿನ ತುಂಡಿನಲ್ಲಿ ಎಲೆ, ಹೂ ಮೊದಲಾದ ಅಚ್ಚುಗಳಿಂದ ಮಡಕೆ ಹಸಿ ಇದ್ದಾಗ ಈ ಅಚ್ಚುಗಳನ್ನು ಒತ್ತಿ ಅಲಂಕಾರ ಮಾಡುವರು. ಸೊಳದಲ್ಲಿ ರಂಧ್ರ ಕೊರೆದು ಅಚ್ಚು ಸಿಕ್ಕಿಸಿ ಮಡಕೆಯ ಮೇಲೆ ಒತ್ತುವದು ಹೆಚ್ಚು ಬಳಕೆಯಲ್ಲಿದೆ. ಪ್ರಾಚ್ಯ ಶಾಸ್ತ್ರಜ್ಞರಾದ ಅ. ಸುಂದರ ಅವರು ನಡೆಸಿದ ಬೆಳಗಾವಿ ಜಿಲ್ಲೆಯ ವಡಂಗಾವ್ ಮತ್ತು ಮಾಧವಪುರ ಉತ್ಖನನದಲ್ಲಿ ಸಣ್ಣ ನಾಣ್ಯಗಳನ್ನು ತಯಾರಿಸುತ್ತಿದ್ದ ಸುಟ್ಟ ಮಣ್ಣಿನ ಚಪ್ಪಟೆಯ ದುಂಡು ಅಚ್ಚುಗಳು ದೊರೆತಿವೆ.
ಪರ್ಯಾಯ ಪದ: ಕೊಂಬಿನ ಅಚ್ಚು ತೀಡೊ ಅಚ್ಚು

ಅಡಕಲು ಗಡಿಗೆ

(ನಾ)
ಒಂದರಮೇಲೊಂದು ಏರಿಸಿಟ್ಟ ಗಡಿಗೆಗಳು. ಗ್ರಾಮೀಣ ಜನರು ಕಾಳು-ಕಡಿ ಹಣ ಮತ್ತು ಆಹಾರ ಪದಾರ್ಥಗಳನ್ನು ಹಾಕಿಡಲು ಗಡಿಗೆಗಳನ್ನು ಒಂದರ ಮೇಲೊಂದು ಏರಿಸಿಡುವರು.ಈ ಅಡಕಲು 5-6 ಅಡಿ ಎತ್ತರದವರೆಗೆ ಏರಿಸುವುದರಿಂದ ಅದು ಬೀಳಬಾರದೆಂದು ನೆಲದ ಮೇಲೆ ಸಿಂಬೆಯಾಕಾರದಲ್ಲಿ ಸ್ವಲ್ಪ ತಗ್ಗು ಮಾಡುವರು. ತಳಭಾಗದಲ್ಲಿ ಮೊದಲು ದೊಡ್ಡಗಡಿಗೆಗಳನ್ನಿಟ್ಟು ನಂತರ ಗಡಿಗೆಗಳನ್ನು ಏರಿಸುವರು. ಅಡಕಲು ಗಡಿಗೆಯನ್ನು ಅಡುಗೆ ಮನೆ ಇಲ್ಲವೆ ಅಡುಗೆ ಮನೆ ಸಮೀಪದ ಕೋಣೆಯಲ್ಲಿ ಇಡುವರು.
“ಅಡಕಿಲ ಮಡಕೆಗಳಂ ಸಯ್ತಿಡಲರೆವುದೆ ನಾಯ್ಗಳೊಡೆವುದಲ್ಲದೆ?” (ನಯಸೇನ)
ಅಡಕಲಾಗ ಆರು ಕಾಸು ಸೊಂಟದಾಗ ಮೂರು ಕಾಸು (ಗಾದೆ)

ಅಡಿಗಾರ್

(ನಾ)
ಅನ್ನ ಬೇಯಿಸುವ ಗಡಿಗೆ, ಇದು ತುಳುಪದ ದಕ್ಷಿಣ ಕನ್ನಡದಲ್ಲಿ ಬಳಕೆಯಲ್ಲಿದೆ.

ಆಡುಮಡಕೆ

(ನಾ)
ಅಡುಗೆ ಮಾಡುವ ಪಾತ್ರೆ, ಬೆಂಕಿಯಿಂದ ಅಡುಗೆ ಮಾಡುವದಕ್ಕೆ ಅನುಕೂಲವಾದ ವಿಶಿಷ್ಟ ರಚನೆಯ ಮಣ್ಣಿನ ಪಾಕ ಪಾತ್ರೆ. ಕುಕ್-ರ್ (cooker)

ಅಮ್ಮನಗುಳ್ಳಿ

(ನಾ)
ಗ್ರಾಮ ದೇವತೆಯ ಉತ್ಸವದ ದಿನ ದೇವಾಲಯಕ್ಕೆ ತೆಗೆದುಕೊಂಡು ಹೋಗುವ ಕುಳ್ಳಿ, ಕುಡಿಕೆ, ಕುಡಿಕೆಯ ಕಂಠದ ಕೆಳಗೆ ಪಾದವನ್ನು ಮಾಡುವರು.

ಅರ್ಲು

(ನಾ)
ಅರಲು, ಜಿಗುಟಾದ ಮಣ್ಣು ನೀರು ಹಾಕಿ ತುಳಿದು ಹದಮಾಡಿಟ್ಟ ಕೆಸರು.
“ಬೆರಳ ಸ್ಪರುಶದಿಂದ ಅರಲು
ಕುಂಭ ಕುಂಭವಾಗುತಿರಲು”
(ಶಂಕರ ಮೋಕಾಶಿ ಪುಣೇಕರ್)

ಅಲ್ಟಿ

(ನಾ)
ಸುಣ್ಣ, ಹತ್ತಿ, ಆಡಿನ ಹಾಲು ಸೇರಿಸಿ ಮಿಶ್ರಮಾಡಿ ಅರೆದ ಕಣಕ. ಇದನ್ನು ಬಿರುಕು ಬಿಟ್ಟ ತೂತು ಬಿದ್ದ ಮಡಕೆಗಳಿಗೆ ಹಚ್ಚುವರು. ಮಡಿಕೆ ಒಡೆದು ಅದು ಕಳಚಿ ಬೀಳುವದಿಲ್ಲ. ಅಷ್ಟು ಗಟ್ಟಿಯಾಗಿರುತ್ತದೆ. ಈ ಶಬ್ದ ಧಾರವಾಡ, ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಯೋಗದಲ್ಲಿದೆ.
ನೋಡಿ ಕಿಟ್ಟ

ಅವಳಿಗಡಿಗೆ

(ನಾ)
ದ್ವಿಪಾತ್ರೆ. ಗಡಿಗೆ ಒಂದೆ ಇದ್ದು ಬಾಯಿ ಮಾತ್ರ ಎರಡು, ಇದರಿಂದ ಉರುವಲಿನ ಉಳಿತಾಯವಾಗುವುದು. ಇದರ ಬಳಕೆ ಅಷ್ಟಾಗಿ ಇಲ್ಲ.

ಅಳಗೆ

(ನಾ)
ದೊಡ್ಡ ಮಡಿಕೆ, ಅಳ್ಗೆ, ಈ ಪದ ಮೈಸೂರು ಭಾಗದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.

ಅಕೃತಿ

(ನಾ)
ಆಕಾರ, ರೂಪ, ಒಂದು ಆಕೃತಿಯನ್ನು ಅನೇಕ ಬಗೆಯ ವಸ್ತುಗಳಿಂದ ರೂಪಿಸಬಹುದು. ಜೇಡಿಮಣ್ಣಿನಿಂದ ಆಕೃತಿ ರಚಿಸುವರು.
ಉದಾ: ಮಣ್ಣಿನಗೊಂಬೆ, ಆಟಿಕೆ ಸಾಮಾನುಗಳು ಇತ್ಯಾದಿ.

ಆಯ

(ನಾ)
ಆದಾಯ, ವರಮಾನ, ಹುಟ್ಟುವಳಿ, ಹಳ್ಳಿಗಳಲ್ಲಿ ವಂಶಪರಂಪರೆಯಿಂದ ಸೇವೆ ಸಲ್ಲಿಸಿಕೊಂಡು ಬಂದಿರುವವರಿಗೆ ಕಣದಲ್ಲಿ ರಾಶಿ ಮಾಡುವಾಗ ನಿರ್ದಿಷ್ಟ ಪ್ರಮಾಣದಲ್ಲಿ ಕೊಡಲ್ಪಡುವ ಧಾನ್ಯ-ವರ್ಷಾಶನ. ಗ್ರಾಮೀಣ ಸಮುದಾಯದ ಒಂದು ಭಾಗವಾಗಿದ್ದ ಕುಂಬಾರನು, ದೈನಂದಿನ ಅವಶ್ಯಕತೆಗೆ ಬೇಕಾದ ಮಡಿಕೆ ಕುಡಿಕೆಗಳನ್ನು ಪೂರೈಸುತಿದ್ದುದರಿಂದ ಇತರೆ ಕಸಬುದಾರರಂತೆ ಆಯ ಪದ್ಧತಿಗೆ ಒಳಗಾಗಿದ್ದ. ಸುಗ್ಗಿಯ ಕಾಲದಲ್ಲಿ ರೈತರು ಕುಂಬಾರನ ಸೇವೆಗೆ ಪ್ರತಿಯಾಗಿ ತಾವು ಬೆಳೆದ ದವಸ ಧಾನ್ಯಗಳನ್ನು ಆಯ ರೂಪದಲ್ಲಿ ಕೊಡುತ್ತಿದ್ದರು. ಈಗಲೂ ಈ ಪದ್ಧತಿ ಹಳ್ಳಿಗಳಲ್ಲಿ ಇದೆ. ಆಯ ಪದ್ಧತಿ ಹಳ್ಳಿಯ ಕಂಬಾರ, ಬಡಿಗ, ಮುಂತಾದ ಕಸಬುದಾರರಿಗೆ ಹೆಚ್ಚಿನ ಆದಾಯವನ್ನು ಒದಗಿಸುತ್ತಿದ್ದರಿಂದ ಇದು ಬಡ ಕಸಬುದಾರರಿಗೆ ನೆಮ್ಮದಿಯ ಜೀವನ ಸಾಗಿಸಲು ಅನುಕೂಲವಾದ ಪದ್ಧತಿಯಾಗಿತ್ತು. ಈ ಆಯ ಪದ್ಧತಿ ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಇದ್ದುದು ತಿಳಿದುಬರುತ್ತದೆ.
ಆಯಾ ಹಾಕುವಾಗಲೇ ನ್ಯಾಯ ಬಂತು (ಗಾದೆ)

ಆಲುಕ

(ನಾ)
ನೀರನ್ನು ಹಾಕಿಡುವ ಸಣ್ಣ ಪಾತ್ರೆ, ಹೂಜಿ

ಆವಿಗೆ

(ನಾ)
ಆವುಗೆ, ಆವಿ, ಕುಂಬಾರನ ಆವಿಗೆ, ಕುಂಬಾರನು ಮಡಿಕೆಗಳನ್ನು ಸುಡಲು ಉಪಯೋಗಿಸುವ ಒಲೆ-ಭಟ್ಟಿ, ಕುಂಬಾರಿಕೆಯ ಮೂಲಭೂತ ಆವಶ್ಯಕತೆಗಳಲ್ಲಿ ಆವಿಗೆಯು ಮುಖ್ಯ. ಅವಿಗೆಯನ್ನು ಕಲ್ಲು ಮಣ್ಣುಗಳಿಂದ ಇಲ್ಲವೆ ಇಟ್ಟಿಗೆಗಳಿಂದ ಕಟ್ಟುವರು. ಆವಿಗೆಯ ಗಾತ್ರಕ್ಕನುಗುಣವಾಗಿ ಅದರ ಬಾಯಿಗಳಿರುತ್ತವೆ. ಆವಿಗೆ ಚಿಕ್ಕದಾಗಿದ್ದರೆ ಒಂದು ಬಾಯಿ ಮಧ್ಯಮವಾಗಿದ್ದರೆ ಎರಡು ಬಾಯಿಗಳು ಮತ್ತೂ ದೊಡ್ಡದಾಗಿದ್ದರೆ ಮೂರು ಬಾಯಿಗಳಿರುತ್ತವೆ. ಆವಿಗೆಗಳನ್ನು ಸಾಮಾನ್ಯವಾಗಿ ಆಯತಾಕಾರದಲ್ಲಿ ಮತ್ತು ವೃತ್ತಾಕಾರದಲ್ಲಿ ಕಟ್ಟುವರು.
1. ಆಯತಾಕಾರದ ಅವಿಗೆ ಸಾಮಾನ್ಯವಾಗಿ 4-5 ಮೀಟರ್ ಉದ್ದವಾಗಿರುವುದು. ಮುಂಭಾಗದಲ್ಲಿ ಕಡಿಮೆ ಅಗಲವೂ ಹಿಂಭಾಗದಲ್ಲಿ ಹೆಚ್ಚು ಅಗಲವೂ ಆಗಿರುವುದು. ಅಂದರೆ ಮುಂಭಾಗದಲ್ಲಿ ಸುಮಾರು 2.5 ಮೀಟರ್ ಅಗಲವಿರುವುದು. ಹಿಂಭಾಗದಲ್ಲಿ 4 ಮೀಟರ್ ಅಗಲ ಇರುವುದು. ಮುಂಭಾಗದ ಬಾಯಿಯ ಹತ್ತಿರದ ಗೋಡೆ 2 ಮೀ ರಿಂದ 1.5 ಮೀಟರ್ ಎತ್ತರವಾಗಿದ್ದರೆ ಹಿಂಭಾಗಕ್ಕೆ ಎತ್ತರ ಕಡಿಮೆಯಾಗುತ್ತ ಹೋಗಿ 0.75 ಮೀಟರ್-ಗೆ ನಿಲ್ಲುತ್ತದೆ.
2. ವೃತ್ತಾಕಾರದ ಆವಿಗೆ ವರ್ತುಲಾಕಾರದಲ್ಲಿ ಇದ್ದು, ಸುಮಾರು 2 ಮೀಟರ್ ಎತ್ತರವಾಗಿರುವುದು.
3. ವಿದ್ಯುತ್ ಆವಿಷ್ಕಾರವಾದಾಗಿನಿಂದ ವಿದ್ಯುತ್ ಆವಿಗೆಗಳು ಬಳಕೆಗೆ ಬಂದಿವೆ.
4. ಇತ್ತೀಚಿನ ದಿನಗಳಲ್ಲಿ ಫೈಬರ್ ಕವಚದ ಒಲೆಗಳೂ ಬಂದಿವೆ, ಇವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಅಲ್ಲದೆ ಕೇವಲ 3-4 ಗಂಟೆಗಳಲ್ಲಿ ಮಡಕೆಗಳನ್ನು ಸುಡಬಹುದು. ಕ್ರಿ.ಶ. ಪೂರ್ವ ಸುಮಾರು ಒಂದು ಸಾವಿರ ವರ್ಷಗಳ ಪೂರ್ವದಲ್ಲಿ ಕೋರಿಯಾ, ಚೀನಾ, ಜಪಾನ್ ದೇಶಗಳಲ್ಲಿ ಕುಂಬಾರರು ಮಡಕೆಗಳನ್ನು ಸುಡಲು ಆವಿಗೆಯನ್ನು ಬಳಸುತ್ತಿದ್ದರೆಂದು ತಿಳಿದು ಬರುತ್ತದೆ.
1. “ಆವಿಗೆಯ ಕಿಚ್ಚಿನಂತೆ ಸುಳಿ ಸುಳಿದು ಬೆಂದೆ” (ಅಕ್ಕಮಹಾದೇವಿ)
2. “ಆವಗೆಯೊಳಗೆ ತಂಪುಗಳುಂಟೆ” (ಭೀಮ ಕವಿ)
3. “ಆವಿಗೆಯ ಬಲು ಗಿಚ್ಚಿನುರಿಯೊಳು ಬೇವ ಮಡಕೆಗಳಂತ” (ಮಹಲಿಂಗರಂಗ)
ಕುಂಬಾರನ ಆವಿಗೆಯಲ್ಲಿ ಚೆಂಬು ಹುಡುಕಿದ ಹಾಗೆ.(ಗಾದೆ)

ಆವಿಗೆ ಇಡು

(ಕ್ರಿ)
ಆವಿಗೆ ಕಟ್ಟು, ಮಡಿಕೆಗಳನ್ನು ಆವಿಗೆಯಲ್ಲಿಟ್ಟು ಸುಡುವುದು. ಆವಿಗೆ ಕಟ್ಟುವಾಗ ಮೊದಲು ದೊಡ್ಡ ದೊಡ್ಡ ಗಡಿಗೆ, ಹರಿವಾಣ, ಪಚೇಲಿ, ಕೊಡ ಇತ್ಯಾದಿಗಳನ್ನು ಕೆಳಭಾಗದಲ್ಲಿ ಜೋಡಿಸುವರು. ಆನಂತರ ಚಿಕ್ಕ, ಚಿಕ್ಕ, ಗಡಿಗೆ, ಚಟಿಕೆ ಮುಂತಾದವುಗಳನ್ನು ಬೋರಲಾಗಿ ಹೊಂದಿಸುವರು. ಹೀಗೆ ಹೊಂದಿಸುವಾಗ ಉರಿ ಎಲ್ಲಡೆ ಹರಡಲು ಅನುಕೂಲವಾಗಲೆಂದು ಅಲ್ಲಲ್ಲಿ ಒಡೆದ ಮಡಿಕೆ ಚೂರು, ಬೋಕಿಗಳನ್ನು ಆನಿಕೆಯಾಗಿ ಹಚ್ಚುವರು. ಎಲ್ಲ ಮಡಿಕೆ-ಕುಡಿಕೆಗಳನ್ನು ಜೋಡಿಸಿಯಾದ ಮೇಲೆ ಕೊನೆಯಲ್ಲಿ ಮುಚ್ಚಳಗಳನ್ನು ಬೋರಲಾಗಿ ಹೊಂದಿಸುವರು ಆಮೇಲೆ ಆವಿಗೆಯ ಮೇಲ್ಭಾಗದಲ್ಲಿ ಸೊಪ್ಪು, ಹುಲ್ಲು ಸೆದೆಯನ್ನು ಹರಡಿ ಅದರ ಮೇಲೆ ಹಸಿಯಾದ ಬೂದಿಯನ್ನು ಮೇಲು ಹೊದಿಕೆಯಾಗಿ ಮುಚ್ಚುವರು. ಆವಿಗೆ ಕಟ್ಟುವಾಗ ತಳದಲ್ಲಿ ಉರುವಲು ಮುಚ್ಚುವರು. ಆವಿಗೆ ಕಟ್ಟುವಾಗ ತಳದಲ್ಲಿ ಉರುವಲು ಕಿಚ್ಚು ಎಲ್ಲಡೆ ಪಸರಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ಮರದ ತುಂಡುಗಳನ್ನು ಇಟ್ಟು, ಆವಿಗೆಯ ಹಿಂಭಾಗದಲ್ಲಿ ಹೊಗೆ ಹೋಗಲು ಕಿಂಡಿಗಳನ್ನು ಬಿಡುವರು. ಆಮೇಲೆ ಆವಿಗೆಯ ಬಾಯಿಯ ಮೂಲಕ ಬೆಂಕಿಯನ್ನು ಹಾಕಿ ಉರುವಲನ್ನು ಮೆಲ್ಲಕೆ ಒಳಕ್ಕೆ ಚಾಚುತ್ತ ಆವಿಗೆ ಸುಡಲು ಆರಂಭಿಸುವರು.

ಆವಿಗೆ ಕಾಯಿಸು

(ಕ್ರಿ)
ಆವಿಗೆ ಬಿಸಿ ಮಾಡುವುದು, ಆವಿಗೆಯಲ್ಲಿ ಮಡಕೆಗಳನ್ನು ಸುಡಲು ಇಟ್ಟ ನಂತರ ಆರಂಭದಲ್ಲಿ ಆವಿಗೆಯ ಬಾಯಿಯ ಮುಂದುಗಡೆ ಸಗಣಿ. ಕುಳ್ಳು ಚಿಕ್ಕ, ಚಿಕ್ಕ, ಕಟ್ಟಿಗೆಯ ತುಂಡುಗಳನ್ನಿಟ್ಟು ಬೆಂಕಿ ಹೊತ್ತಿಸುವುದು. ನಿಧಾನವಾಗಿ ಒಂದೆರಡು ಗಂಟೆ ಆವಿಗೆ ಕಾಯಿಸುವರು. ಒಂದೇ ಬಾರಿಗೆ ಹೆಚ್ಚು ಉರಿ ಹಾಕಿದಲ್ಲಿ ಹಸಿ ಮಡಕೆಗಳು ಸೀಳು ಬಿಡುವ ಸಂಭವ ಹೆಚ್ಚು ಆವಿಗೆ ಪೂರ್ಣವಾಗಿ ಬಿಸಿಯಾದ ಮೇಲೆ ಉರಿಯನ್ನು ಮೆಲ್ಲ ಮೆಲ್ಲನೆ ಚಾಚುಗೋಲಿನಿಂದ ಆವಿಗೆ ಒಳಕ್ಕೆ ತಳ್ಳುವರು.

ಆವಿಗೆ ಕಿಚ್ಚು

(ನಾ)
ಆವಿಗೆಯ ಬೆಂಕಿ, ಜ್ವಾಲೆ, ಉರಿ, ಮಣ್ಣಿನ ಮಡಿಕೆಗಳು ಚೆನ್ನಾಗಿ ಸುಟ್ಟು ಗಟ್ಟಿಯಾಗಬೇಕಾದರೆ ಅದಕ್ಕೆ ಹೆಚ್ಚು ಉಷ್ಣತೆ ಅಗತ್ಯ ಆದ್ದರಿಂದ ಆವಿಗೆಯಲ್ಲಿ ಕಿಚ್ಚು ಪ್ರಬಲವಾಗಿ ಎಲ್ಲೆಡೆ ಹರಡಿಕೊಳ್ಳುವಂತೆ ಉರುವಲಿಗಾಗಿ ಮುಳ್ಳಿನ ಕಂಟಿ, ಕಟ್ಟಿಗೆ, ಸ್ಥಳೀಯವಾಗಿ ದೊರೆಯುವ ಸೌದೆಗಳನ್ನು ಬಳಸುವರು. ಆವಿಗೆಯ ಕಿಚ್ಚು ಹೆಚ್ಚಾಗುತ್ತ ಹೋದಂತೆ ಮಡಿಕೆಗಳೆಲ್ಲವು ಕಾದ-ಕಬ್ಬಿಣದಂತೆ ಕೆಂಪಗಾಗುತ್ತ ಹೋಗುತ್ತವೆ. ಆಗಾಗ ಬ್ಯಾಕೋಲಿನಿಂದ ಕಿಚ್ಚನ್ನು ಹಿಂದೆ ಸರಿಸುವರು. ಹೀಗೆ ಇಡೀ ಆವಿಗೆ ಕೆಂಡಮಯವಾಗಿ ಕಂಡಾಗ ಮಡಿಕೆಗಳೆಲ್ಲವೂ ಚೆನ್ನಾಗಿ ಸುಟ್ಟಿವೆ ಎಂದು ಖಚಿತವಾಗುವುದು.

ಆವಿಗೆ ಕಿಡಿ

(ನಾ)
ಕಿಡಿ, ಬೆಂಕಿ, ಆವಿಗೆಯಲ್ಲಿ ಮಡಕೆಗಳನ್ನಿಟ್ಟು ಸುಡುತ್ತಿರುವಾಗ ಆವಿಗೆ ಬಿಸಿಯಾಗಿ ಬೆಂಕಿಯ ಕಿಡಿಗಳು ಆವಿಗೆಯ ಹಿಂದೆ ಇಟ್ಟಿರುವ ಕಿಂಡಿಗಳ ಮೂಲಕ ಹೊರಬರುತ್ತವೆ. ಆವಿಗೆ ಕಾಯುತ್ತಿರುವುದಕ್ಕೆ ಇದು ಸೂಚನೆ.
< previous1234567891920Next >

Search Dictionaries

Loading Results

Follow Us :   
  Download Bharatavani App
  Bharatavani Windows App