Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಚತುರಂಗ
[ನಾ] ಆನೆ, ಕುದುರೆ, ರಥ, ಪದಾತಿಗಳಿಂದ ಕೂಡಿದ ಸೈನ್ಯ (ಚತುರಂಗಂ ಚತುರಂಗಸೈನ್ಯದೊಳಡರ್ತುಂ ತಿಱಱನೆಯ್ತಂದು ತಾಗಿ: ಪಂಪಭಾ, ೧೧. ೭); [ನಾ] [ಚತುರ್+ಅಂಗ] ನಾಲ್ಕು ಭಾಗಗಳುಳ್ಳ (ಅಂತು ದ್ರೋಣಚಾರ್ಯಂ ಆಚಾರ್ಯಪದವಿಯಂ ಕೈಕೊಂಡು ಪಾಂಡವಕೌರವರ್ಗೆ ಚತುರಂಗ ಧನುರ್ವೇದಮುಮಂ ದಿವ್ಯಾಸ್ತ್ರಂಗಳಂ .. .. ಉಪದೇಶಂಗೆಯ್ಯುತ್ತಿರೆ: ಪಂಪಭಾ, ೨. ೫೫ ವ)
ಚತುರಂತಕ್ಷಿತಿ
[ನಾ] ನಾಲ್ಕು ದಿಕ್ಕುಗಳ ನಡುವಣ ಭೂಮಿ (ಚತುರಂತಕ್ಷಿತಿ ಗರ್ಭಸ್ಥಿತನದು ಗಡಿಮೆಂದು ಮುದ್ರಿಪಂತಾಯ್ತು ಯಶಸ್ವತಿಯ ಪದನ್ಯಾಸಂ: ಆದಿಪು, ೮. ೩೨)
ಚತುರಯುತ
[ನಾ] ನಲವತ್ತು ಸಾವಿರ (ಚತುರಯುತಮಿತಾಂಗರಕ್ಷಕ ಪರಿವೃತನುಂ ಲೋಕಪಾಲ ಚತುಷ್ಟಯಾಧಿಷ್ಠಿತನುಂ: ಆದಿಪು, ೬. ೧೩ ವ)
ಚತುರರ್ಣವಪರೀತ
[ಗು] ನಾಲ್ಕು ಸಮುದ್ರಗಳಿಂದ ಸುತ್ತುವರಿಯಲ್ಪಟ್ಟ (ಚತುರರ್ಣವಪರೀತ ಮಹೀತಳಮೆಲ್ಲಮಂ ಧರಾಮರರ್ಕಳ್ಗೆ ದಕ್ಷಿಣೆಗೊಟ್ಟನಪ್ಪುದಱಿಂ: ಪಂಪಭಾ, ೬. ೧೭ ವ)
ಚತುರಶೀತಿ
[ನಾ] ಎಂಬತ್ತನಾಲ್ಕು (ಮತ್ತಂ ಚತುರಶೀತಿಸಹಸ್ರ ಗುಣಮಣಿಭೂಷಣವಿಭೂಷಿತನುಂ ಅಷ್ಟಾದಶಸಹಸ್ರ ಶೀಲ ರತ್ನಾಕರನುಂ ಆಗಿ ಪಂಚದಶಪ್ರಮಾದಂಗಳಂ ಬಂಚಿಸಿ: ಆದಿಪು, ೬. ೨೯ ವ)
ಚತುರಶ್ರ
[ನಾ] ನಾಲ್ಕು ಮೂಲೆಗಳುಳ್ಳದ್ದು, ಚಚ್ಚೌಕ (ಚತುರಶ್ರಂ ಮೂಱುಂ ಯೋಜನದಳವಿಯ ಸಭಾಮಂಟಪಮಂ ಒಂದು ಲಕ್ಕ ರಕ್ಕಸವಡೆಯಿಂ ಪೊತ್ತು ತರಿಸಿ: ಪಂಪಭಾ, ೬. ೨ ವ)
ಚತುರಾಂತರ
[ನಾ] ಚಚ್ಚೌಕದ ನಡುವೆ, ಹಸೆಯ ಜಗುಲಿ (ವಿವಾಹಗೇಹಮಂ ಸಮೆಯಿಸಿ ಅದಱ ನಡುವಣ ಆರ್ದ್ರಮೃತ್ತಿಕಾ ವಿರಚಿತಮಪ್ಪ ಚತುರಾಂತರದೊಳ್: ಪಂಪಭಾ, ೩. ೭೪ ವ)
ಚತುರಾನನತ್ವ
[ನಾ] [ಜೈನ] ನಾಲ್ಕು ಮುಖಗಳಿಂದ ಕೂಡಿರುವುದು (ಮಿತನಖಕೇಶಶೋಭಿತ ತನುತ್ವಂ ಅಭುಕ್ತ್ಯುಪಸರ್ಗಭಾವಂ ಅನ್ವಿತಚತುರಾನನತ್ವಂ ಅಖಿಳಾಗಮವಿತ್ತ್ವಂ: ಆದಿಪು, ೧೦. ೪೩)
ಚತುರಿಂದ್ರಿಯ
[ನಾ] ಪಂಚೇಂದ್ರಿಯಗಳಲ್ಲಿ ಕಿವಿಯ ಹೊರತು ಉಳಿದ ನಾಲ್ಕು ಇಂದ್ರಿಯಗಳಿರುವ ಜೀವಿ, ಕೀಟ (ಸ್ಪರ್ಶನ ರಸನ ಘ್ರಾಣ ಚಕ್ಷರಿಂದ್ರಿಯಸಮನ್ವಿತಂಗಳಪ್ಪ ಮಧುಕರಾದಿ ಚತುರಿಂದ್ರಿಯಂಗಳ್: ಆದಿಪು, ೧೦. ೬೩ ವ)
ಚತುರುತ್ತರಾಶೀತಿ
[ನಾ] ಎಂಬತ್ತನಾಲ್ಕು (ಚತುರುತ್ತರಾಶೀತಿ ಪೂರ್ವಲಕ್ಷೋಪಲಕ್ಷಿತ ಅನಪವರ್ತ್ಯ ಆಯುಷ್ಯನುಂ ಆಗಿ: ಆದಿಪು, ೮. ೪ ವ) [ಬಸವರಾಜು ಮತ್ತು ನರಸಿಂಹಶಾಸ್ತ್ರಿ ಅವರ ಆವೃತ್ತಿಗಳಲ್ಲಿ]
ಚತುರ್ಗತಿ
[ನಾ] [ಜೈನ] ದೇವ, ಮಾನವ, ತಿರ್ಯಕ್, ನಾರಕ ಎಂಬ ನಾಲ್ಕು ವಿಧವಾದ ಜನ್ಮಗಳು (ಚತುರ್ಗತಿಸ್ವರೂನಿರೂಪಣಂ ತಪೋದಾನವಿಧಾನ ವರ್ಣನಂ .. .. ಎಂದಿಂತು ಅವಯವಂಗಳೆಂಟಕ್ಕುಂ: ಆದಿಪು, ೧. ೪೨ ವ)
ಚತುರ್ಜ್ಞಾನ
[ನಾ] [ಜೈನ] ಪಂಚವಿಧಜ್ಞಾನಗಳಲ್ಲಿ ನಾಲ್ಕನೆಯದು, ಮನಃಪರ್ಯಯಜ್ಞಾನ (ನೆಗೞ್ದುದು ದೀಕ್ಷಾನಂತರಂ ಅಗಣಿತಪುಣ್ಯೋದಯಂ ಮನಃಪರ್ಯಯಂ ಅಂತೊಗೆದಾ ಚತುರ್ಜ್ಞಾನದೊಳಾವಗಮೆಸೆದಂ ಜ್ಞಾನರೂಪನಾದಿಬ್ರಹ್ಮಂ: ಆದಿಪು, ೯. ೮೮)
ಚತುರ್ಥಧ್ಯಾನ
[ನಾ] [ಜೈನ] ಆರ್ತ, ರೌದ್ರ, ಧರ್ಮ, ಶುಕ್ಲ ಎಂಬ ನಾಲ್ಕು ಬಗೆಯ ಧ್ಯಾನಗಳಲ್ಲಿ ಕೊನೆಯದು (ಅಪಗತಯೋಗಗುಣಸ್ಥಾನನುಂ ಚತುರ್ಥಧ್ಯಾನಾನಳದಗ್ಧ ಶೇಷಾಶೇಷ ಕರ್ಮೇಂಧನನುಮಾಗಿ: ಆದಿಪು, ೧೬. ೭೪ ವ)
ಚತುರ್ಥಸ್ನಾನ
[ನಾ] ಮುಟ್ಟಾದವಳು ನಾಲ್ಕನೆಯ ದಿನ ಮಾಡುವ ಸ್ನಾನ (ಮರುದೇವಿ ಮಹಾದೇವಿ ಚತುರ್ಥಸ್ನಾನದೊಳ್ ಕಲ್ಪದ್ರುಮ ದುಕೂಲವಸನೆಯುಂ ಊರ್ಜಿತ ದಶನಮಯೂಖ ಜಳಪ್ರಕ್ಷಾಳಿತದಶನವಸನೆಯುಂ .. .. ಆಗಿ (ಆದಿಪು, ೭. ೨೬)
ಚತುರ್ದಶ
[ನಾ] ಹದಿನಾಲ್ಕು (ಚತುರ್ದಶ ಮಹಾನದಿಗಳ ನೀರುಮಂ ತೞತೞ ತೊಳಗುವ ಕಳಧೌತಕಳಶಂಗಳೊಳ್ ತೆಕ್ಕನೆ ತೀವಿ ತಂದ ವಾರವನಿತಾ ಜನಕ್ಕಂ: ಪಂಪಭಾ, ೧೪. ೧೭ ವ)
ಚತುರ್ದಶ ಮಹಾನದಿ
[ನಾ] ಹದಿನಾಲ್ಕು (ಚತುರ್ದಶ ಮಹಾನದಿಗಳ ನೀರುಮಂ ತೞತೞ ತೊಳಗುವ ಕಳಧೌತಕಳಶಂಗಳೊಳ್ ತೆಕ್ಕನೆ ತೀವಿ ತಂದ ವಾರವನಿತಾಜನಕ್ಕಂ: ಪಂಪಭಾ, ೧೪. ೧೭ ವ) [ಮಹಾನದಿಗಳು: ಸರಸ್ವತೀ, ಭಾಗೀರಥೀ, ಯಮುನಾ, ಗೋದಾವರೀ, ಕೃಷ್ಣವೇಣೀ, ತಾಮ್ರಪರ್ಣಿ, ಸುವರ್ಣಮುಖೀ, ನರ್ಮದಾ, ತುಂಗಭದ್ರಾ, ಚಂದ್ರಭಾಗಾ, ಚರ್ಮಣ್ವತೀ, ಕುಮುದ್ವತೀ, ಸರಯೂ, ಫಲ್ಗುನೀ]
ಚತುರ್ದಶಗುಣಸ್ಥಾನ
[ನಾ] [ಜೈನ] ಮೋಹ ಹಾಗೂ ಯೋಗಗಳ ನಿಮಿತ್ತದಿಂದ ಆತ್ಮನ ದರ್ಶನ ಮತ್ತು ಚಾರಿತ್ರ ರೂಪ ಗುಣಗಳ ಕ್ರಮವಿಕಾಸ ರೂಪ ಅವಸ್ಥೆಗಳು; ಮಿಥ್ಯಾದೃಷ್ಟಿ, ಸಾಸಾದನ, ಮಿಶ್ರ, ಅಸಂಯತ ಸಮ್ಯಗ್ದೃಷ್ಟಿ, ಸಂಯತಾಸಂಯತ, ಪ್ರಮತ್ತಸಂಯತ, ಅಪ್ರಮತ್ತಸಂಯತ, ಅಪೂರ್ವಕರಣ, ಅನಿವೃತ್ತಿಕರಣ, ಸೂಕ್ಷ್ಮಲೋಭ, ಉಪಶಾಂತ ಕಷಾಯ, ಕ್ಷೀಣಕಷಾಯ, ಸಯೋಗಕೇವಲಿ, ಅಯೋಗಕೇವಲಿ (ಚತುರ್ದಶಗುಣಸ್ಥಾನಂಗಳಂ ನಂಬಿ ಪೊರ್ದಿದವರ್ ಪೊರ್ದಿದರಲ್ತೆ ಮುಕ್ತಿವನಿತಾ ಕಾಂಚೀಗುಣಸ್ಥಾನಮಂ: ಆದಿಪು, ೧೫. ೧೯)
ಚತುರ್ದಶಪೂರ್ವ
[ನಾ] [ಜೈನ] ಉತ್ಪಾದ, ಆಗ್ರಾಯಣೀಯ, ವೀರ್ಯಪ್ರವಾದ, ಅಸ್ತಿನಾಸ್ತಿಪ್ರವಾದ, ಜ್ಞಾನಪ್ರವಾದ, ಸತ್ಯಪ್ರವಾದ, ಆತ್ಮಪ್ರವಾದ, ಕರ್ಮಪ್ರವಾದ, ಪ್ರತ್ಯಾಖ್ಯಾನ, ವಿದ್ಯಾನುವಾದ, ಕಲ್ಯಾಣ, ಪ್ರಾಣಾವಾಯ, ಕ್ರಿಯಾವಿಶಾಲ, ಲೋಕಬಿಂದುಸಾರ (ಅಂತು ಜೈನದೀಕ್ಷೆಯಂ ಕೈಕೊಂಡು ಗುರುವಿನನುಮತದಿಂ ದ್ವಾದಶಾಂಗ ಚತುರ್ದಶಪೂರ್ವಂಗಳಂ ಕಲ್ತು: ಆದಿಪು, ೧೪. ೧೩೯ ವ)
ಚತುರ್ನಿಕಾಯಾಮರ
[ನಾ] [ಜೈನ] ಭವನವಾಸಿ, ವ್ಯಂತರ, ಜ್ಯೋತಿಷ ಮತ್ತು ಕಲ್ಪವಾಸಿಗಳೆಂಬ ನಾಲ್ಕು ಪ್ರಕಾರದ ದೇವತೆಗಳು (ಅಂತು ಪೊಡೆವಟ್ಟು ಜನ್ಮಾಭಿಷೇಕೋದ್ಯುಕ್ತ ಚಿತ್ತನಾದಾಗಳ್ ಚತುರ್ನಿಕಾಯಾಮರೇಂದ್ರಸಮುದಯಂ: ಆದಿಪು, ೭. ೪೨ ವ)
ಚತುರ್ಬಲ