Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಪಂಕಜವಕ್ತ್ರ
[ನಾ] ತಾವರೆಯಂತಹ ಮುಖ[ವುಳ್ಳವನು] (ಸಾಲಪ್ರಾಂಶು ವಿಶಾಲ ಲೋಲನಯನಂ ಪ್ರೋದ್ಯತ್ ವೃಷಸ್ಕಂಧಂ ಉನ್ಮೀಲತ್ ಪಂಕಜವಕ್ತ್ರಂ ಆಯತ ಸಮಗ್ರ ಉರಸ್ಸ್ಥಳಂ: ಪಂಪಭಾ, ೧. ೬೮)
ಪಂಕಜವಿಷ್ಟರ
[ನಾ] ಕಮಲದ ಆಸನವುಳ್ಳವನು, ಬ್ರಹ್ಮ (ಸ್ಫುರಿತೋದ್ಯತ್ಕನಕ ಪ್ರಭಾಪ್ರಸರದಿಂ ಪೀತಾಂಬರಂ ಪದ್ಮವಿಷ್ಟರದಿಂ ಪಂಕಜವಿಷ್ಟರಂ ನತವಿನೇಯವ್ರಾತ ಚೇತಸ್ತಮೋಹರನಾಗಿರ್ದುದಱಿಂ ಹರಂ: ಆದಿಪು, ೧೬. ೬)
ಪಂಕಪ್ರಭೆ
[ನಾ] [ಜೈನ] ಏಳು ನರಕಗಳಲ್ಲಿ ನಾಲ್ಕನೆಯದು, (ಪಂಕಪ್ರಭೆಯೊಳ್ ದಶಬ್ಧ್ಯುಪಮೆಯಿಂ ದುಃಖಾಗ್ನಿಯೊಳ್ ಬೆಂದು: ಆದಿಪು, ೫. ೪)
ಪಂಕೇಜಗರ್ಭಾತ್ಮಜ
[ನಾ] [ಪಂಕೇಜಗರ್ಭ+ಆತ್ಮಜ = ಬ್ರಹ್ಮನ ಮಗ] ನಾರದ (ಎಮ್ಮನ್ವಯಕ್ಷ್ಮಾಪರ್ ಆವ ವಿಳಾಸಂಗೊಳ್ ಇರ್ಪರ್ ಏದೊರೆತು ತಾಂ ಎಮ್ಮಯ್ಯನೈಶ್ವರ್ಯಂ ಇಂತು ಇವನೆಲ್ಲಂ ತಿಳಿವಂತುಟಾಗಿ ಬೆಸಸಿಂ ಪಂಕೇಜಗರ್ಭಾತ್ಮಜಾ: ಪಂಪಭಾ, ೬. ೧೫)
ಪಂಕೇಜಪತ್ರಾಂಬು
[ನಾ] [ಪಂಕೇಜ+ಪತ್ರ+ಅಂಬು] ತಾವರೆಯ ಎಲೆಯ ಮೇಲಿನ ನೀರು (ಅರ್ಕಂ ಅಳುರ್ಕೆಗೆಟ್ಟು ನಭದಿಂ ತೂಳ್ದಂ ಸುರುಳ್ದಪ್ಪಿದಳ್ ಮೃಡನಂ ಗೌರಿ ಸಮಸ್ತಂ ಈ ತ್ರಿಭುವನಂ ಪಂಕೇಜಪತ್ರಾಂಬುವೋಲ್ ನಡುಗಿತ್ತು: ಪಂಪಭಾ, ೧೦. ೨೬)
ಪಂಕೇಜಪತ್ರೇಕ್ಷಣೆ
[ನಾ] ತಾವರೆಯ ದಳದಂತೆ ಕಣ್ಣುಳ್ಳವಳು (ಅತ್ಯುಗ್ರ ಆಜಿಯೊಳ್ ಮುನ್ನಂ ಈ ಖಳ ದುಶ್ಶಾಸನನಂ ಪೊರಳ್ಚಿ ಬಸಿಱಂ ಪೋೞ್ದಿಕ್ಕಿ ಬಂಬಲ್ಗರುಳ್ಗಳಿಂ ಆನಲ್ತೆ ವಿಳಾಸದಿಂ ಮುಡಿಯಿಪೆಂ ಪಂಕೇಜಪತ್ರೇಕ್ಷಣೇ: ಪಂಪಭಾ, ೭. ೧೨)
ಪಂಕೇಜವಕ್ತ್ರೆ
[ನಾ] ಕಮಲಮುಖಿ (ಅಂತೆ ಬಂದು ಪಂಕೇಜವಕ್ತ್ರೆ ಮತ್ಸ್ಯಸುತನಂ ನುಡಿದಳ್: ಪಂಪಭಾ, ೮. ೯೭)
ಪಂಕೇರುಹನಾಭ
[ನಾ] ಬ್ರಹ್ಮ (ದ್ವಾರಾವತೀಪುರಕ್ಕೆ ಚರರಂ ತಡವಿಲ್ಲದೆ ಬೇಗಮಟ್ಟಿ ಪಂಕೇರುಹನಾಭನಂ ಬರಿಸಿ: ಪಂಪಭಾ, ೬. ೨೧)
ಪಕ್ಕ
[ನಾ] ಹತ್ತಿರ (ಕಲ್ಪಮಹೀಜದ ಪಕ್ಕದ ಇರ್ಕೆಲಂಬಿಡಿದು ಮಡಲ್ತು ತೋಱುವ ಲತಾವಳಿಗಳ್ಗೆಣೆಯಾಯ್ತು: ಆದಿಪು, ೨. ೪); [ನಾ] ಎದುರು, ಸಮಕ್ಷಮ (ನುಡಿ ನಿನಗಂ ದಿನೇಶತನಯಂಗಂ ಅದೆನ್ನಯ ಪಕ್ಕದೆ ಆದೊಡಂ ಮಿಡುಕದೆ ಕೇಳ್ವೆಂ ಅಲ್ಲಿ ಸಮಂ ಇರ್ವರುಂ: ಪಂಪಭಾ, ೧೩. ೨೮)
ಪಕ್ಕರೆ
[ನಾ] [ಪಕ್ಷರಕ್ಷೆ] ಪಕ್ಕದಲ್ಲಿ ಹಾಕುವ ಗುಳ, ಜೀನು (ಪಕ್ಕರೆಯಿಕ್ಕಿ ಬಂದುವು ಹಯಂ ಘಟೆ ಪಣ್ಣಿದುವಾಯುಧಂಗಳಿಂ ತೆಕ್ಕನೆ ತೀವಿ ಬಂದುವು ರಥಂ: ಪಂಪಭಾ, ೩. ೬೭)
ಪಕ್ಕಾಗು
[ಕ್ರಿ] ಆಶ್ರಯಿಸು (ಕುಳಿರ್ಕೋೞ್ವ ನಂದನಕಂ ಚಂದನಕಂ ಪಸುರ್ಪೆಸೆವ ಬಾೞ್ಜೊಂಪಕ್ಕಂ ಒಂದೊಂದೆ ತಣ್ಬನಿಯೊಳ್ ಕೋಡಿಸುತಿರ್ಪ ಬಿಜ್ಜಣಿಗೆಗಂ ಪಕ್ಕಾಗದೇಂ ಪೋಪರೇ: ಆದಿಪು, ೧. ೭೫); [ಕ್ರಿ] ಗುರಿಯಾಗು (ನೂಪುರರವವಿಳಸತ್ ವಾಮಪಾದಪ್ರಹಾರಕ್ಕಿದಱೊಳ್ ಪಕ್ಕಾಗಿ ಗೋತ್ರಸ್ಖಲನೆ ನೆಗೞೆ: ಆದಿಪು, ೪. ೯)
ಪಕ್ಕುಗೊಡು
[ಕ್ರಿ] ಎಡೆ ಮಾಡಿಕೊಡು (ಮನಂ ಮಱುಕಕ್ಕೆ ನೀಳ್ದ ಕಣ್ ಒಱೆದು ಉಗುವ ಅಶ್ರುವಾರಿಗೆ ತೊದಳ್ನುಡಿ ಲಲ್ಲೆಗೆ ಪಕ್ಕುಗೊಟ್ಟು: ಪಂಪಭಾ, ೪. ೧೨)
ಪಕ್ಕುಮಾಡು
[ಕ್ರಿ] ಜೊತೆಮಾಡು, ಅನುಸರಿಸವಂತೆ ಮಾಡು (ಸೌಧರ್ಮೇಂದ್ರನೇಱಿದ ಐರಾವತಗಜೇಂದ್ರಕ್ಕೆ ನಿಜಗಜೇಂದ್ರಂಗಳಂ ಪಕ್ಕುಮಾಡಿ: ಆದಿಪು, ೭. ೪೯ ವ)
ಪಕ್ಕುವಾರ್
[ಕ್ರಿ] ಅವಕಾಶಕ್ಕಾಗಿ ಕಾಯಿ (ಬಳಸಲಿಂ ನಿನ್ನನಾ ಕಾಂತೆಯಂತಾ ನಳಿತೋಳ್ಗಳ್ ಪಕ್ಕುವಾರ್ದಿರ್ದುವು: ಆದಿಪು, ೪. ೨೧)
ಪಕ್ಕೆ
[ನಾ] [ಬೇಟೆಯ ಮೃಗ] ಮಲಗುವ ಜಾಗ (ಮೃಗಮಂ ಗಾಳಿಯಂ ಇರ್ಕೆಯಂ ಪಕ್ಕೆಯಂ ಗಣಿದಮಂ ಕಂಡಿಯಂ ಮಾರ್ಕಂಡಿಯಂ: ಪಂಪಭಾ, ೫. ೪೩)
ಪಕ್ವಫಲನಮ್ರ
[ನಾ] ಮಾಗಿದ ಹಣ್ಣುಗಳ ಭಾರದಿಂದ ಬಾಗಿದ (ಪಕ್ವಫಲನಮ್ರ ಆಮ್ರಾದಿಭೂಜಂಗಳ್ ಈ ಯುಗದೊಳ್ ಕಲ್ಪಕುಜಂಗಳಂತೆ: ಆದಿಪು, ೬. ೭೭)
ಪಕ್ಷ
[ನಾ] [ಜೈನ] ಹದಿನೈದು ಅಹೋರಾತ್ರಿಗಳು ಅಥವಾ ದಿವಸಗಳು (ಅದು ಸಮಯ ಆವಳಿಕ ಉಚ್ಛ್ವಾಸ ಸ್ತೋಕ ನಿಮೇಷ ನಾಳಿಕಾ ಮುಹೂರ್ತ ದಿವಸ ಪಕ್ಷ ಮಾಸ ಋತು ಅಯನ ಸಂವತ್ಸರಾದಿ ಗಣನಾಕ್ರಮದಿಂದಂ ಪೆರ್ಚಿದೆಣಿಕೆಯೊಳ್ ಕೂಡಿದುದು: ಆದಿಪು, ೬. ೬೮ ವ); [ನಾ] ಚಂದ್ರನ ಬೆಳವಣಿಗೆ ಮತ್ತು ಕ್ಷೀಣತೆಗಳ ಹದಿನೈದು ದಿವಸಗಳ ಅವಧಿ (ಸಿತಪಕ್ಷದ ಪಂಚಮಿ ದಿನಪತಿವಾರಂ ಶುಭದ ಮೂಲನಕ್ಷತ್ರದೊಳ್ ಅನ್ವಿತಮಾಗೆ ನೆಗೞ್ದುದೀಮತ್ಕೃತಿ ಜಗದೊಳ್ ಪುದಿದು ಸಾಗರಾಂತಕ್ಷಿತಯಂ: ಆದಿಪು, ೧೬. ೭೮)
ಪಕ್ಷಗಜ
[ನಾ] ಪಕ್ಕದಲ್ಲಿ ಸಾಗುವ ಆನೆ (ಸೈನ್ಯಾಧಿನಾಥನ ಕೆಲದೊಳ್ ಪಕ್ಷಗಜಾಧಿರೂಢನಾಗಿ ದೇವ ನೋಡೀ ತೋರ್ಪುದು: ಆದಿಪು, ೧೩. ೪೫ ವ)
ಪಕ್ಷ್ಮ
[ನಾ] ಕಣ್ಣಿನ ರೆಪ್ಪೆಗೂದಲು (ಲಲಿತಮುಖಸರಸಿಜಂ ನಿಶ್ಚಳಪಕ್ಷ್ಮಂ ಸ್ತಿಮಿತತಾರಕಂ ಭುಜಬಲಿ: ಆದಿಪು, ೧೪. ೧೦೫)
ಪಕ್ಷ್ಮಪಾತ