भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಭವಭಯಹರಣ

[ನಾ] ಸಂಸಾರದ ಕೋಟಲೆಯನ್ನು ನಾಶಮಾಡುವಂಥದು (ದುರಿತಘನತಿಮಿರದಶಶತಕಿರಣಂ ಅತಿಪ್ರೀತಿಕರಣಂ ಅಖಿಳವಿನೇಯೋದ್ಧರಣಂ ಎಮಗಭವ ಭವಭಯಹರಣಂ ಭವದೀಯ ಸಮವಸರಣಂ ಶರಣಂ: ಆದಿಪು, ೧೪. ೩೮)

ಭವವಾರಾಶಿ

[ನಾ] ಐಹಿಕತೆಯೆಂಬ ಸಮುದ್ರ (ಭವವಾರಾಶಿ ನಿಮಗ್ನರಂ ದಯೆ ದಮಂ ದಾನಂ ತಪಂ ಶೀಲಂ ಎಂಬಿವೆ ಮೆಯ್ಯಾಗಿರೆ ಸಂದ ಧರ್ಮಮೆ ವಲಂ ಪೊತ್ತೆತ್ತುಗುಂ: ಆದಿಪು, ೨. ೭)

ಭವಸಂಸ್ಕಾರ

[ನಾ] ಜಾತಿಸ್ಮರಣೆ (ಚಾರಣಯುಗಳಕ್ಕೆ ವಿಧಿಪೂರ್ವಕಂ ಮಹಾದಾನಮನಿತ್ತುದಂ ಆಗಳಾಗಳೆ ಪುಟ್ಟಿದ ಭವಸಂಸ್ಕಾರದಿಂದಂ ಸವಿಸ್ತರಮಱಿದು: ಆದಿಪು, ೯. ೧೩೧ ವ)

ಭವಾನೀಧವ

[ನಾ] ಭವಾನಿಯ ಗಂಡ, ಶಿವ (ಇದು ಕೈಲಾಸಂ ಭವಾನೀಧವನ ನೆಲೆ ಮನೋಜಾತನಂ ಬೂದಿಮಾಡಿತ್ತಿದಱೊಳ್: ಪಂಪಭಾ, ೭. ೭೪)

ಭವಾಂಬುಧಿ

[ನಾ] ಸಂಸಾರಸಮುದ್ರ (ಅಭಯರ್ ನಿರೋಗರುಂ ಶ್ರುತವಿಭವಸಮನ್ವಿತರುಮಪ್ಪರ್ ಎಂಬುದು ಪಿರಿದಲ್ತು ಭವಾಂಬುಧಿಯುಮನೀಸುವರ್ ಅಭಯೌಷಧಶಾಸ್ತ್ರದಾನ ಫಳವಿಳಸನದಿಂ: ಆದಿಪು, ೧೦. ೧೧)

ಭವಿಷ್ಯತ್

[ಗು] ಮುಂದೆ ಸಂಭವಿಸುವ (ಅಂತು ಭವಿಷ್ಯತ್ ದ್ವಿಜನ್ಮವರ್ಣಕೆ ಅಧ್ಯಯನಧ್ಯಾಪನ ದಾನಪ್ರತಿಗ್ರಹ ಯಜನ ಯಾಜನ ಶಿಷ್ಟವೃತ್ತಿಯುಮಂ .. .. ನಿಱಿಸಿ: ಆದಿಪು, ೮. ೭೩ ವ)

ಭವ್ಯ

[ನಾ] [ಜೈನ] ಜಿನಧರ್ಮದಲ್ಲಿ ನಂಬಿಕೆಯಿಟ್ಟವನು (ಅದುವೆ ಭಾವಿಸಿ ಓದುವ ಕೇಳ್ವ ಪೂಜಿಪ ಆದರಿಸುವ ಭವ್ಯಕೋಟಿಗೆ ನಿರಂತರಸೌಖ್ಯಮನೀವುದು: ಆದಿಪು, ೧. ೯); ಮೋಕ್ಷಕ್ಕೆ ಅರ್ಹನಾದ ಜೀವ (ಆತನಭವ್ಯನಲ್ಲಂ, ಭವ್ಯನೇ, ಭವ್ಯನಾಗಿಯುಂ ಆಸನ್ನಭವ್ಯಂ: ಆದಿಪು, ೨. ೩೫ ವ)

ಭವ್ಯಚಿಂತಾಮಣಿ

[ನಾ] ಭವ್ಯರ ಆಸೆಗಳನ್ನು ನೆರವೇರಿಸುವವನು (ಗುಣಮೆಂಟುಂ ಬಂದು ತನ್ನೊಳ್ ಪೆಣೆದಿರೆ .. .. ಭವ್ಯಚಿಂತಾಮಣಿಯುಂ ತಾನಾಗಿ: ಆದಿಪು, ೧. ೪)

ಭವ್ಯತೆ

[ನಾ] [ಜೈನ] ಮೋಕ್ಷಾರ್ಹತೆ, ರತ್ನತ್ರಯ ಪ್ರಾಪ್ತವಾಗುವಿಕೆ (ಭವ್ಯತೆ ಪುಣ್ಯಜೀವಮಂ ಸಹಜಸುಖಾಸ್ಪದಂಬರೆಗಂ ಉಯ್ವಿನಂ ಅಲ್ಲಿ ತೊಡಂಕಲೀಗುಮೇ: ಆದಿಪು, ೬. ೨೫)

ಭವ್ಯಪದ್ಮಾಕರಬೋಧಾದಾಯಿ

[ನಾ] ಭವ್ಯರೆಂಬ ತಾವರೆ ಕೊಳಕ್ಕೆ ಜ್ಞಾನ ನೀಡುವವನು (ನಾಭಿರಾಜಾಂಗನೆ ವಿಶದಯಶೋ ಭಾಗಿಯಂ ಭವ್ಯಪದ್ಮಾಕರ ಬೋಧಾದಾಯಿಯಂ ತಿಗ್ಮಕರನುದಯದೊಳ್ ಪುತ್ರನಂ ಪೆತ್ತಳಾಗಳ್: ಆದಿಪು, ೭. ೩೬)

ಭವ್ಯಾವಳಿ

[ನಾ] [ಜೈನಮತದಲ್ಲಿ] ನಂಬಿಕೆಯುಳ್ಳ ಭಾವುಕರು (ತ್ರಿದಶಸ್ತುತ್ಯಮಿದು ಆದಿದೇವಚರಿತಂ ಕರ್ಣಾಮೃತಸ್ಯಂದಿಯಕ್ಕೆ ಭವ್ಯಾವಳಿಗೆಂದು ಪೇೞಿಸೆ ಬುಧರ್: ಆದಿಪು, ೧೬. ೭೯)

ಭಸಿತ

[ನಾ] ಬೂದಿ, ವಿಭೂತಿ (ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತ ರಸಪ್ರಸಾದಂ ಉಜ್ಜಳಜಸಂ ಅಂಗಸಂಗತ ಲಸತ್ ಭಸಿತಂ ಪ್ರಭುಶಕ್ತಿ ಶಕ್ತಿ: ಪಂಪಭಾ, ೧. ೨)

ಭಸ್ಮರಜ

[ನಾ] ವಿಭೂತಿಯ ಪುಡಿ (ಸರಿಗೆಯೊಳ್ ಸಮೆದ ಅಕ್ಷಮಾಲಿಕೆ ಪೊನ್ನ ಮುಂಜಿ ತೊಳಪ್ಪ ಕಪ್ಪುರದ ಭಸ್ಮರಜಃ ತ್ರಿಪುಂಡ್ರಕಂ ಒಪ್ಪೆ: ಪಂಪಭಾ, ೬. ೮)

ಭಸ್ಮೋದ್ಧೂಳಿತ

[ಗು] {ಭಸ್ಮ+ಉದ್ಧೂಳಿತ] ವಿಭೂತಿಯನ್ನು ಧರಿಸಿದ (ವಲ್ಕಲವಸನರುಂ ಕೌಪೀನಧಾರಿಗಳುಂ ಭಸ್ಮೋದ್ಧೂಳಿತಾಂಗರುಂ .. .. ಆಗಿ ತಮಗೆ ತಾವೇ ವನಪ್ರವೇಶಮಂ ಮಾಡಿ: ಆದಿಪು, ೯. ೯೩ ವ)

ಭಾ

[ನಾ] ಕಾಂತಿ (ಸುಲಿಪಲ್ ಮಿಂಚಿನ ಗೊಂಚಲುಟ್ಟ ದುಗುಲಂ ಗಂಗಾನದೀಫೇನಂ ಉಜ್ಜ್ವಲಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಂ .. .. ಕಣ್ಗೊಪ್ಪಿತಾ ಕಾಂತೆಯಾ: ಪಂಪಭಾ, ೧. ೧೩೭)

ಭಾ ಭಾರ

[ನಾ] ಕಾಂತಿಪ್ರಸರ (ಉಜ್ಜ್ವಲಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಂ .. .. ಕಣ್ಗೊಪ್ಪಿತಾ ಕಾಂತೆಯಾ: ಪಂಪಭಾ, ೧. ೧೩೭)

ಭಾಗಿನೇಯ

[ನಾ] ಭಗಿನಿಯ [ಅಕ್ಕ ಅಥವಾ ತಂಗಿ] ಮಗ, ಸೋದರಳಿಯ (ನಿನ್ನ ನಲ್ಲನೆ ಗಡಂ ಮತ್ ಭಾಗಿನೇಯಂ ಮಹೋತ್ಸವದಿಂ ಬಂದಪಂ: ಆದಿಪು, ೩. ೮೪)

ಭಾಜನ

[ನಾ] ಪಾತ್ರೆ (ಅಂತಃಪುರಪುರಾಂಗನಾನಿಕರಕ್ಕೆ ಮಣಿಮಯ ಭಾಜನಂಗಳೊಳ್ ತೆಕ್ಕನೆ ತೀವಿದ ಪಂಚರತ್ನದ: ಆದಿಪು, ೪ ೩೪ ವ); [ನಾ] ಯೋಗ್ಯ (ಅನತಿಶಯಸೌಖ್ಯಭಾಜನಜನಕ್ಕೆ ಭಾಜನಮಿದಪ್ಪುವೆಂಬಂತೆ ಕನತ್ಕನಕಮಣಿಖಚಿತ ಬಹುಭಾಜನಂಗಳಂ: ಆದಿಪು, ೫. ೩೮)

ಭಾಜನಾಂಗ

[ನಾ] [ಜೈನ] ಕಲ್ಪಾಂಗಕುಜಗಳಲ್ಲಿ ಒಂದು, ಕೇಳಿದ ಪಾತ್ರೆಗಳನ್ನು ನೀಡುವಂಥದು (ಕಳಧೌತಘಟಂ ಮುಕ್ತಾಫಳಾಂಚಿತಗ್ರೀವಂ ಎೞೆದುಕೊಂಡುದು ತಾರಾವಳಿ ಪರಿವೃತ ನವಸಂಧ್ಯಾಜಳದದ ಗಾಡಿಯಂ: ಆದಿಪು, ೭. ೮೪)

ಭಾಜನಾಂಗತರು

[ನಾ] [ಜೈನ] ಪಾತ್ರೆ ಪಡುಗಗಳನ್ನು ಕೊಡುವ ಕಲ್ಪವೃಕ್ಷ (ಕನತ್ಕನಕಮಣಿಖಚಿತ ಬಹುಭಾಜನಂಗಳಂ ಭಾಜನಾಂಗತರು ಕುಡುತರ್ಕುಂ: ಆದಿಪು, ೫. ೩೮)

Search Dictionaries

Loading Results

Follow Us :   
  Download Bharatavani App
  Bharatavani Windows App