Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಮಡ
[ನಾ] ಕಾಲಿನ ಹರಡು (ಮಡದೆಡೆ ನಾಲ್ವೆರಲ್ ಅಂಗುಟದೆಡೆಯೊಳ್ ಗೇಣಾಗೆ ನಿಲ್ವುದಿಚ್ಛಾಗತಂ: ಆದಿಪು, ೯. ೮೪); [ನಾ] ತೇರಿನ ಪಾರಿ, ಗಾಡಿಯ ಎರಡೂ ಕಡೆ ಆಸರೆಯಾದ ಮರದ ಪಟ್ಟಿಯೇ ಪಾರಿ (ಉಡಿದಿರ್ದ ಅಚ್ಚು ಅೞಿದ ಈಸು ತೞ್ಗಿದ ನೊಗಂ ಜೀಱೆೞ್ದ ಚಕ್ರಂ ಸಿಡಿಲ್ ಪೊಡೆದಂತೆ ಒರ್ಮೆಯೆ ಸೂಸಿ ಪಾಱಿದ ಮಡಂ ನುರ್ಗಾದ ಕೀಲ್: ಪಂಪಭಾ, ೧೦. ೯೧)
ಮಂಡಕ
[ನಾ] ಒಂದು ಭಕ್ಷ್ಯ, ಮಂಡಿಗೆ (ಅಲ್ಪದಶನದಂಶಮಾತ್ರ ಖಂಡನೀಯ ಮಂಡಕಮುಮಂ: ಆದಿಪು, ೧೧. ೨೬ ವ)
ಮಡಕಾಲ್
[ನಾ] ಮಂಡಿಯಿಂದ ಕಣಕಾಲಿನವರೆಗಿನ ಭಾಗ (ಪಿಡಿಕೆಯ್ ತೀವಿದ ಕೂರ್ಗಣೆ ಮಡಕಾಲ್ವರಂ ಅಲೆವ ಕಚ್ಚೆ ನಿಡಿಯಸಿಯ ಒಱೆ ಕರ್ಪಿಡಿದ ಪಣೆಕಟ್ಟು ಕೆಯ್ಪಡೆ ಬೆಡಂಗನೊಳಕೊಳೆ ಧನುರ್ಧರರ್ ಪೆಣೆದೆಚ್ಚರ್: ಪಂಪಭಾ, ೧೦. ೭೧)
ಮಡಗಿಡು
[ಕ್ರಿ] ಮರೆಯಾಗಿರಿಸು (ಮಡಗಿಡಲೆಂದು ಪುತ್ತಿನೊಳಗೆ ಒಯ್ಯನೆ ಕುತ್ತಿದ ಕಯ್ಯಂ: ಆದಿಪು, ೨. ೪೦); ಸುರಕ್ಷಿತವಾಗಿರಿಸು (ಕಮ್ಮನಪ್ಪ ತುಪ್ಪದ ಕೊಡದೊಳ್ ಸಮಂತು ಮಡಗಿಟ್ಟೊಡೆ ಸೃಷ್ಟಿಗೆ ಚೋದ್ಯಮಪ್ಪಿನಂ: ಪಂಪಭಾ, ೧. ೧೩೧)
ಮಡಗು
[ಕ್ರಿ] ಇರಿಸು (ಕೆಯ್ಗಟ್ಟಳೆ ಕೊಳ್ಳಿಂ ಎಂದು ಕುಡೆ ಷೋಡಶ ಋತ್ವಿಜರ್ಗೆ ಇತ್ತುದಕ್ಕೆ ಬಾಯ್ವಿಟ್ಟಿರೆ ವಿಪ್ರಕೋಟಿ ಮಡಗಲ್ಕೆಡೆಯಿಲ್ಲದೆ ಪೊನ್ನ ರಾಶಿಯಂ: ಪಂಪಭಾ, ೬. ೩೯)
ಮಡಗೂೞ್
[ನಾ] ಎಂಜಲನ್ನ, ಉಚ್ಚಿಷ್ಟ (ಈತನೊಳ್ ತೊಟ್ಟ ಕಿಂಕರಭಾವಂ ಎಮಗಕ್ಕಿಗೊಟ್ಟು ಮಡಗೂೞುಣ್ಬಂದಮಂ ಪೋಲದೇ: ಆದಿಪು, ೧೪. ೩೨)
ಮಂಡನ
[ನಾ] ಅಲಂಕಾರ (ವ್ಯೂಹದೊಳ್ ನಿಟ್ಟೆವಟ್ಟು ಮಣಿಮಯ ಮಂಡನಾಯೋಗದೊಳೊಡಂಬಟ್ಟ ಪಿಡಿಗಳುಮಂ: ಆದಿಪು, ೪. ೫೪ ವ)
ಮಂಡನವಿಧಿ
[ನಾ] ಅಲಂಕರಿಸುವ ಕೆಲಸ (ಉಪ್ಪವಡಿಸಿ ಮಜ್ಜನ ಮಂಡನವಿಧಿಯಂ ಲತಾಂಗಿ ನಿರ್ವರ್ತಿಸಿ ಭೂಮಂಡಳಪತಿಗಱಿಪಿದೊಡೆ: ಆದಿಪು, ೭. ೨೮)
ಮಂಡನಾಯೋಗ
[ನಾ] ಆನೆಯ ಮೇಲೆ ಅಲಂಕಾರಕ್ಕಾಗಿ ಹಾಕುವ ಜೂಲು (ಮದೇಭಗಣಕ್ಕೆ ಮಂಡನಾಯೋಗಮುಮಾದುವಾ ಕೊಳದ ಕೋಮಳನೀರಜಪುಷ್ಪಜಾತಿಗಳ್: ಆದಿಪು, ೪. ೯೪)
ಮಂಡನೀಭೂತ
[ಗು] ಅಲಂಕಾರಪ್ರಾಯವಾದ (ಆಸ್ಥಾನಮಂಡಪ ಮಂಡನೀಭೂತಮಣಿಮಯಾಸನ ಪ್ರಾಚ್ಯಾಚಳಶಿಖಂಡ ರತ್ನಮಾಗಿರ್ದ ಕುಮಾರನಂ ಸಾರೆವಂದು: ಆದಿಪು, ೮. ೮ ವ)
ಮಂಡಪ
[ನಾ] ಮಂಟಪ (ನರಶಿಲ್ಪಿಗಳಿಂ ಮಂಡಪವಿರಚನೆ ನೆಗೞುತ್ತಮಿರ್ದುದಿತ್ತೊಂದೆಡೆಯೊಳ್: ಆದಿಪು, ೯. ೬೮)
ಮಡಂಬ
[ನಾ] ಐನೂರು ಹಳ್ಳಿಗಳಿಂದ ಸುತ್ತುವರಿದ ನಗರ (ಪಂಚಶತಗ್ರಾಮ ಪರೀತಂಗಳಪ್ಪ ಮಡಂಬಂಗಳುಮಂ: ಆದಿಪು, ೮. ೬೩ ವ)
ಮಂಡಲ
[ನಾ] ಗುಂಪು (ಎಂದತಿಲಲಿತಸಮುಚ್ಚಳಿತ ರಶನಾಕಳಾಪ ನೂಪುರಕಿಂಕಿಣೀಕ್ವಣಿತ ಅನುಸಾರಿಯಾಗಿ ಬರ್ಪ ರಾಜಹಂಸಮಂಡಲಮಂ ಮಗುೞ್ಚಿ ಬರ್ಪಾಗಳ್: ಆದಿಪು, ೧೧. ೧೩೮ ವ); [ನಾ] ರಾಜ್ಯ, ರಾಜ್ಯದ ಭಾಗ (ಇತ್ತುಂ ತೆತ್ತುಂ ಬಾೞ್ವ ಮಂಡಲಮಲ್ಲದೆ ಕೀಱಿಯುಂ ಮೀಱಿಯುಂ ನೆಗೞ್ವ ಮಂಡಲಮಿಲ್ಲ: ಪಂಪಭಾ, ೬. ೬೭ ವ)
ಮಂಡಲಾಗ್ರ
[ನಾ] ಕತ್ತಿಯುಳ್ಳವನು (ಕೋಟಲೆಗೊಳ್ವ ಕೌರವೇಶ್ವರನಂ ಎಯ್ದೆ ಪೋಗಿ ಹಸ್ತಪ್ರಹಸ್ತಮಂಡಲಾಗ್ರನುಂ ಶೋಕವ್ಯಗ್ರನುಂ ಆಗಿ: ಪಂಪಭಾ, ೧೩. ೧೦೨ ವ)
ಮಂಡಲಿ
[ನಾ] ಜನಸಮೂಹ (ಬೆಲೆಯಿಡಲಱಿವೊಡೆ ಮಂಡಲಿ ಬೆಲೆಯಿಡುಗೆಮ ನೋೞ್ಪೊಡಿವರ ತೇಜದ ಮೇಲುಜ್ಜ್ವಲತೇಜ ನಿನ್ನ ತೇಜಂ ನೆಲಸಿದುದೆನೆ ಪೇೞವರ್ಕೆ ಬೆಲೆಗಳುಮೊಳವೇ: ಆದಿಪು, ೧೩. ೩೦)
ಮಡಲ್
[ಕ್ರಿ] ಹಬ್ಬು (ನಿಲ್ತುವು ರಸಂಗಳಿಲ್ಲಿ ಮಡಲ್ತು ಎನೆ ಭಂಗಿಯೊಳ್ ಅನಂಗಜಂಗಮಲತೆವೊಲ್ ನಿಲ್ತು: ಆದಿಪು, ೯. ೨೦); [ನಾ] ಬಳ್ಳಿ (ಅಲರ್ ಕಣ್ ಮುಗುಳ್ ನಗೆ ಮಡಲ್ ತೊಡೆ ತುಂಬಿ ಕುರುಳ್ ತಳಿರ್ ತಳಂ ಗೊಲೆ ಕೆಂಪು ಕೆಂಪು ಕೊನೆ ಸೆಳ್ಳುಗುರ್ಗಳ್: ಪಂಪಭಾ, ೫. ೧೨)
ಮಂಡವಿಗೆ
[ನಾ] ಮಂಟಪ (ಕತ್ತುರಿಯ ಸಗಣನೀರ್ ಬಿಡುಮುತ್ತಿನ ರಂಗವಲಿ ಮಿಳಿರ್ವ ದುಗುಲದ ಗುಡಿ ಸಂಪತ್ತಿನ ಬಿತ್ತರದೆತ್ತಿದ ಮುತ್ತಿನ ಮಂಡವಿಗೆ ಪೊೞಲ ಮನೆಗಳೊಳೆಲ್ಲಂ: ಪಂಪಭಾ, ೩. ೨)
ಮಂಡಳ
[ನಾ] ರಥವನ್ನು ನಡೆಸುವ ಒಂದು ರೀತಿ (ಮಂಡಳ ಭ್ರಾಂತ ಉದ್ಭ್ರಾಂತ ಸ್ಥಿತಚಕ್ರಮೆಂಬ ರಥಯುದ್ಧದೊಳಂ .. .. ಅತಿ ಪ್ರವೀಣರುಂ ಜಾಣರುಂ ಆಗಿ: ಪಂಪಭಾ, ೧೩. ೩೮ ವ)
ಮಂಡಳಾವರ್ತನ
[ನಾ] ಗದೆಯನ್ನು ಗುಂಡಾಗಿ ಚಕ್ರದಂತೆ ತಿರುಗಿಸುವುದು (ಸವ್ಯಾಪಸವ್ಯ ಭ್ರಾಂತೋದ್ಭ್ರಾಂತ ಕರ್ಷಣ ಮಂಡಳಾವರ್ತನಾದಿಗಳಪ್ಪ ಮೂವತ್ತೆರಡು ಗದಾವಿಕ್ಷೇಪದೊಳಂ: ಪಂಪಭಾ, ೧೩. ೯೨ ವ)
ಮಂಡಳಿಕ